ವಾರ್ಷಿಕೋತ್ಸವದ ಸಂಭ್ರಮ‌ ಜುಲೈ ಮಾಸ 2020


ಸ್ನೇಹಿತರೇ,
ನಲ್ಮೆಯ ಕವಿಮನಗಳೇ ಎಲ್ಲರಿಗೂ ನಮಸ್ಕಾರ.

ನಮ್ಮ ಸಂಸ್ಥೆ ಪ್ರಾರಂಭವಾಗಿ ಒಂದು ವರುಷವಾಯಿತು.   ಈ ವಾರ್ಷಿಕೋತ್ಸವದ ಸುಸಮಯದಲ್ಲಿ, ನಮ್ಮ ಜೊತೆಗೆ ನಿರಂತರವಾಗಿರುವ ಕವಿಮಿತ್ರರಾದ ನಿಮಗೆ ಅಭಿನಂದನೆಗಳು🌷 ಅಲ್ಲದೇ ಒಂದು ಕೋರಿಕೆಯಿದೆ.

ನಿಮ್ಮ ಕಿರುಪರಿಚಯವನ್ನು ನಮಗೆ ಮಾಡಿಕೊಡಬೇಕಾಗಿ ಆಶಿಸುತ್ತೇವೆ. ಹಾಗಾಗಿ ನಾವೇ ನಿಮ್ಮಲ್ಲಿ ವೈಯಕ್ತಿಕವಾಗಿ ಕೇಳಿಕೊಳ್ಳುತ್ತೇವೆ. ನಮಗೆ ಬರೆದು ಕಳುಹಿಸಬೇಕಾಗಿ ವಿನಂತಿ.

ಪ್ರಪ್ರಥಮವಾಗಿ "ಸಾಹಿತ್ಯ ಸಂಕ್ರಾಂತಿ" - ತಿಂಗಳ ಸ್ಪರ್ಧೆ "ರಾಜ್ಯಮಟ್ಟದ ಚುಟುಕು ಸ್ಪರ್ಧೆ" ಏರ್ಪಡಿಸಿ ಮೊದಲ ಮೂವರು ವಿಜೇತರಿಗೆ ಮೊಮೆಂಟೋವನ್ನು ನೀಡಿದ್ದೆವು.

 ಅದರಲ್ಲಿ ವಿಜೇತರಾದ @⁨YQ Pradip⁩ ಪ್ರದೀಪ್ ಅವರು  ಮತ್ತು @⁨Mahantesh Maganura⁩  ಮಹಾಂತೇಶ ಮಾಗನೂರ ಅವರು ನಮ್ಮ ಜೊತೆಗೆ ಇದ್ದಾರೆ.

ಅಲ್ಲದೇ ತದನಂತರ ಹೊಸ-ಹೊಸ ಕವಿಗಳು, ಯುವ ಬರಹಗಾರರ ಪರಿಚಯ ಕೂಡ ಆಗಿದೆ. ಹಿರಿಯರು ಕಿರಿಯರು ಎಲ್ಲರೂ ಜೊತೆಗೆ ಇರುವುದು ನೋಡಿ ಖುಷಿಯಾಗುತ್ತದೆ.  ಒಂದಷ್ಟು ಬರಹಗಾರರು ಬಂದು-ಹೋದವರು ಇದ್ದಾರೆ. ಪರವಾಗಿಲ್ಲ.

ಪ್ರತಿದಿನ ಮುಂಜಾನೆಮಾತು, ಕಿರುಲೇಖನ , ಉಲ್ಲೇಖಗಳು, ಹನಿಗವನ, ಷಟ್ಪದಿಯಲ್ಲಿ ಕವನ, ಗಜಲ್, ಕವನಗಳು, ಹೀಗೆ ನಾನಾ ಪ್ರಕಾರದ ಬರಹಗಳನ್ನು ಪೋಸ್ಟ್ ಮಾಡುತ್ತಿರುವುದು ಖುಷಿಯಾಗುತ್ತದೆ. ಅಲ್ಲದೇ ಸ್ಪರ್ಧೆಯಲ್ಲಿ ಭಾಗವಹಿಸುವುದೂ ಸಂತಸದ ವಿಷಯ. ನೀವೂ ಕೂಡ ಎಲ್ಲರ ಬರಹಗಳನ್ನು ಓದಿ ತಮ್ಮ ಅಭಿಪ್ರಾಯವನ್ನು ತಿಳಿಸಿರಿ.

ಪ್ರತಿದಿನದ ಸ್ಪರ್ಧೆಯಲ್ಲಿ ಭಾಗವಹಿಸಿರಿ‌. ಜನಪದ ಗೀತೆ, ಭಾವಗೀತೆ, ಭಕ್ತಿಗೀತೆ ,ಮಕ್ಕಳ ಪದ್ಯಗಳಿಗೆ ಅದರದೇ ಆದ ಚೌಕಟ್ಟಿರುವುದು. ಲಯಬದ್ಧವಾಗಿ, ಪ್ರಾಸ ಭರಿತವಾಗಿ ಬರೆಯಲೇಬೇಕಾಗುವುದು. ಅದರ ಕಡೆಗೆ ಗಮನ ಹರಿಸಿರಿ.

ನಾವು ಎಲ್ಲಿಯೂ ಯಾರ ಪರವಾಗಿ ಆಯ್ಕೆ ಮಾಡುತ್ತಿಲ್ಲ. ನಿರ್ಣಾಯಕರು ಸರಿಯಾಗಿ ಬರೆದವರನ್ನು ಮಾತ್ರ ಆಯ್ಕೆ ಮಾಡುತ್ತಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ನಮ್ಮ ನಿರ್ಣಾಯಕರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೂ ಈ ಸಮಯದಲ್ಲಿ ವಂದನೆಗಳನ್ನು💐 ತಿಳಿಸ ಬಯಸುವೆನು.


ಎಲ್ಲರಿಗೂ ಶುಭವಾಗಲಿ💐.
ಪ್ರೊ. ಕೆ. ಎಸ್. ಮುರುಳೀಧರ್
ಸಂಸ್ಥಾಪಕ ಅಧ್ಯಕ್ಷರು
ಶ್ರೀಮತಿ ತುಳಸಿ ( ಸಿಂಧು ಭಾರ್ಗವ್ )
ಉಪಾಧ್ಯಕ್ಷರು
ಮತ್ತು
ನಿರ್ಣಾಯಕರ ಬಳಗ
ನವಪರ್ವ ಫೌಂಡೇಶನ್ (ರಿ.) ಬೆಂಗಳೂರು

ಚಿತ್ರಕ್ಕೊಂದು

ಚಿತ್ರಕ್ಕೊಂದು ಕವನ

*ಆತ್ಮೀಯ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ* 🙏✍📚✍📚✍📚✍📚✍📚

*ಇದು 🌄 "ನವಪರ್ವ ಕಾಲ" 🌄 ಭಾಗವಹಿಸಿ 🌄*

*ಇಂದು  ೧೮-೦೫-೨೦೨೦ <> ಸೊಮವಾರ*

*ಇಂದಿನ ಚಿತ್ರಕ್ಕೊಂದು ಕವನ ವಿಭಾಗದ ಚಿತ್ರವನ್ನು ನೀಡಿದ್ದೇವೆ
*ಶೀರ್ಷಿಕೆಯೊಂದಿಗೆ ನಿಮ್ಮ ಸುಂದರ ಕವನಗಳು ಮೂಡಿಬರಲಿ.* *(೨೦ ರಿಂದ ೨೪ ಸಾಲುಗಳ ಮಿತಿಯಲ್ಲಿರಲಿ).*

*ಸ್ಪರ್ಧೆಯ ಸಮಯ ಸಂಜೆ ೦೬ ರಿಂದ ರಾತ್ರಿ ೯-೩೦*

*ಇದು ನಿಮ್ಮದೇ ಆಲೋಚನೆಗಳಿಗೆ ವಿಚಾರಗಳಿಗೆ ವೇದಿಕೆಯಾಗಲಿ.  ಎಲ್ಲರೂ ಬರೆಯಿರಿ. ಬೆಳೆಯಿರಿ. ಬೆಳೆಸಿರಿ.*

*(೧) ಸ್ಪರ್ಧೆಯ ಅವಧಿಯಲ್ಲಿ ಮಾತ್ರ ಸ್ಪರ್ಧೆಗಿರುವ ಬರಹವನ್ನು  ಹಾಕಬೇಕು.*
*(೨) ಸ್ಪರ್ಧೆಯ ಅವಧಿಯಲ್ಲಿ ಬೇರೆ ಪೋಸ್ಟ್ ಗಳನ್ನು ಹಾಕಬೇಡಿ.*
*(೩) ಸಮಯ ಮುಗಿದ ನಂತರ ನಿಮ್ಮ ಅಭಿಪ್ರಾಯಗಳನ್ನು  ತಿಳಿಸಬಹುದು.*
*(೪) ಕವನದ ಮೊದಲು ಶೀರ್ಷಿಕೆ, ಕೊನೆಯಲ್ಲಿ ನಿಮ್ಮ  ಹೆಸರು, ಊರು, ವೃತ್ತಿಯನ್ನು ನಮೂದಿಸಲೇಬೇಕು.*

*ಎಲ್ಲರೂ ಸಹಕರಿಸಿ ✍📚✍📚✍📚✍📚✍📚*

*ಅಧ್ಯಕ್ಷರು ಮತ್ತು ನಿರ್ಣಾಯಕರ ಬಳಗ*
*ನವಪರ್ವ ಫೌಂಡೇಶನ್  (ರಿ.)  ಬೆಂಗಳೂರು.*

ಫಲಿತಾಂಶ :

*ನಿನ್ನೆ  ದಿನಾಂಕ ೧೮- ೦೫ -೨೦೨೦ ಸೋಮವಾರದ "ಕೊಟ್ಟ ಚಿತ್ರಕ್ಕೊಂದು ಕವನ ಸ್ಪರ್ಧೆ"ಯ ಫಲಿತಾಂಶ ಈ ಕೆಳಗಿನಂತಿದೆ*

*ಅತ್ಯುತ್ತಮ ಕವನ ಬರೆದ ಕವಿಗಳು*

೧ ಶಂಕರನಾರಾಯಣ ಉಪಾಧ್ಯಾಯ
೨ ಹರೀಶ್ ಕಜೆ
೩ ನಾಗರತ್ನಾತ್ಮಜೆ
೪ ಬಸವರಾಜ ಕುಂಬಾರ ಬಾಗಲಕೋಟ
೫ ಶಂಕರಾನಂದ ಹೆಬ್ಬಾಳ

*ಉತ್ತಮ ಕವನ ಬರೆದ ಕವಿಗಳು*

೧ ಮಂಜುನಾಥ ಕೆ ಶಿವಪುರ
೨ ಉಷಾ ದಿನೇಶ್
೩ ಪೀರ್ ಸಾಹೇಬ್ ಬೀರಬ್ಬಿ
೪ ಗಾಯತ್ರಿ ನಾರಾಯಣ ಅಡಿಗ
೫ ಅಮೃತಾ ಎಂ ಡಿ


*ಮೆಚ್ಚುಗೆ ಪಡೆದ ಕವನಗಳು*

೧ ಕೋಮಲ ಕಮರವಾಡಿ
೨ ಮಂಜುನಾಥ ನಾಯಕ್ ಎನ್ ಆರ್
೩ ಶ್ರೀಮತಿ ಜೋಶಿ
೪ ಕವಿತಾ ಜಿ ಸಾರಂಗಮಠ
೫ ರೇಣುಕಾ ಎಮ್ ಕೆ
೬ ಪಂಕಜಾ ಕೆ ಮುಡಿಪು

*ವಿಜೇತರೆಲ್ಲರಿಗೂ ಅಭಿನಂದನೆಗಳು ಮತ್ತು ಭಾಗವಹಿಸಿದ ಕವಿಮನಗಳಿಗೆ ಶುಭಹಾರೈಕೆಗಳು* ✍️📚🎁

*ಅಧ್ಯಕ್ಷರು ಮತ್ತು ನಿರ್ಣಾಯಕರು*
*ನವಪರ್ವ ಫೌಂಡೇಶನ್ (ರಿ ) ಬೆಂಗಳೂರು*

ಆಯ್ಕೆಯಾದ ಕವನಗಳು:- ಒಟ್ಟು ೧೬ ಸ್ಪರ್ಧಿಗಳ ಕವನಗಳು ಆಯ್ಕೆಯಾಗಿವೆ. ಅಭಿನಂದನೆಗಳು🌷

ಚಿತ್ರ ಕಾವ್ಯ ಸ್ಪರ್ಧೆಗಾಗಿ

ಚಂದಿರ

ಕನಸಲಿ ಬರುವ ಚಂದಿರ
ನೀನು ಎಷ್ಟು ಸುಂದರ
ಭುವಿ ತುಂಬಾ ಹಾಕಿ ನಗುವೆ
ಹಾಲು ಬೆಳಕಿನ ಹಂದರ ನಾನು/ /

ವಿರಹದಿ ನೊಂದ ಜೋಡಿ ನೋಡಿ
ವಿಷಾದದಿಂದ ಮರಗುವೆ
ಪ್ರೇಮಿಗಳ ಸರಸ ಸಲ್ಲಾಪಕೆ
ನೀನಿಡುವೆ ಬೆಳ್ದಿಂಗಳ ಪೀಠಿಕೆ/ /

ನೀ ಓಡುವಾಗ ನಾನು
ನಿನ್ನೊಡನೆ ಓಡಿಬರುವೆ
 ಕತ್ತಲೆಯ ಗರ್ಭದೊಳಗೆ
ನಾ ನಿನ್ನ ಹಿಡಿದು ನಲಿವೆ//

ಹೊಂಗನಸ ಚೆಲುವನ್ನೆಲ್ಲಾ
ಕಣ್ತುಂಬ ತುಂಬುತಿರುವೆ
ಗ್ರಹತಾರೆ ಬಳಗದೊಡನೆ
ಮಹರಾಜನಾಗಿ ಮೆರೆವೆ//

ಇರಬೇಕು ನಾನು ನೀನು
ಜೊತೆಯಾಗಿ ಮುಂದೆ ಎಂದೂ
ಎತ್ತರೆತ್ತಕೆ ಏರಿ ನಾನು
ನಿನಗಾಗಿ ನಿಂತಿರುವೆನು
ನನ್ನ ಕೈವಶವೂ ಎಂದೂ ನೀನು
ಸವಿ ಹೊನಲ ಬೆಳಕು ಜೇನು//

ಒಲವ ಸಿಹಿ ಉಣಿಸು ನೀನು
ನಿನ್ನೊಡನೆ ಕಾಲ ಕಳೆವೆನು ನಾನು
ಮಲಗಿರಲಿ ಜಗವೆಲ್ಲಾ
ನಮ್ಮ ಏಕಾಂತಕೆ ಭಯವಿಲ್ಲ//
****!*******!*****
-ಕೋಮಲ ಕಮರವಾಡಿ ಚಾಮರಾಜನಗರ (ಗೃಹಿಣಿ)

೨)

ಚಿತ್ರಕೊಂದು ಕವನ ಸ್ಪರ್ಧೆಗಾಗಿ

*ದಿನಾಂಕ:~೧೮-೦೫-೨೦೨೦*

  *ಕನಸಿನೊಳ ಕನಸ ಚಂದ್ರ*

ಇಂದು ಒಂದು ಸುಂದರಾ ಕನಸ ನಾನು ಕಂಡೆ
ಕನಸಿನಲ್ಲಿ ಅಜ್ಜಿ ಊರ ಸುತ್ತಿಕೊಂಡು ಬಂದೆ !
ತೋಟ ಸುತ್ತಿ ಸುಸ್ತಾಗಿ ಅಜ್ಜಿ ಮಡಿಲ ಕಂಡೆ
ಕಂಡ ಒಡನೆ ಮಡಿಲಿನೊಳಗೆ ಸುಖದಿ ಮಲಗಿಕೊಂಡೆ !!೧!!

ಕನಸಿನೊಳಗೆ ಕನಸಕಂಡೆ ಅಲ್ಲಿ ಇರುಳ ಬಯಲು
ಬಯಲಿನಲ್ಲಿ ಎತ್ತ ನೋಡು ಎಲ್ಲ ಕಪ್ಪು ನೆರಳು!
ತಲೆಯ ಮೇಲಕೆತ್ತಿಕೊಂಡೆ ಅಲ್ಲಿ ಕಂಡೆ ಸೊಗಸು
ಸೊಗಸು ಕಂಡ ಮನಸಿನಲ್ಲಿ ಏನೋ ಒಂದು ಕನಸು !!೨!!

ಹೇ ಅರ್ಧ ಚಂದ್ರ ನಿನ್ನ  ಹಿಡಿಯಲೆಂದು ಬಂದೆ
ಕೈಗೆ ಎಟಕದಿರಲು ಒಂದು  ಕುರ್ಚಿ ಹಾಕಿಕೊಂಡೆ  !
ಕುರ್ಚಿ ಏರಿ ತುದಿಯ ಪಾದ ಊರಿಕೊಂಡುನಿಂದೆ
ಹಿಡಿವೆನೆಂಬ ಭ್ರಮೆಯ ಒಳಗೆ ಕಲ್ಪನೆಯಾ ಗೊಂಬೆ !!೩!!

ಸುತ್ತು ಮುತ್ತ ಕತ್ತಲಂತೆ ಬಾನು ಕೂಡ ಕಪ್ಪಗೆ
ಕಪ್ಪಿನಲ್ಲು ಹೊಳೆವ ಚುಕ್ಕೆ ಬಾನಿನೊಡನೆ ಅಪ್ಪುಗೆ !
ಆದರರ್ಧ ಚಂದ್ರನಿಂದು ಬಂದನೇನು ಮುಪ್ಪಿಗೆ
ಜಾರುತಿಹನು ನಿಲ್ಲನೇಕೆ ಸಿಗದೆ ಬಾನ ಒಪ್ಪಿಗೆ !!೪!!

ಬೀಳದಂತೆ ಹಿಡಿವೆ ನಿನ್ನ ಬಾರೊ ಚಲುವ ಚಂದಿರ
ನಿನ್ನ ಒಡನೆ ಆಡಬೇಕು ಆಸೆ ನನಗೂ ಸುಂದರ !
ಸಿಗದೆ ಇದ್ದರೇನು ಕುರ್ಚಿ ಏರಿ ಹಿಡಿವೆ ಕೈಯಲೇ
ಹಿಡಿದುಕೊಂಡೆನೆಂದುಕೂಗೆ ಎಚ್ಚರಾಯ್ತು ಒಮ್ಮೆಲೇ !!೫!!

~~~~~~●~~~~~~

✍ನಾಗರತ್ನಾತ್ಮಜೆ (ಮಂಜಮ್ಮ ಎ ಬಿ)ಗೃಹಿಣಿ ಹೊಳೆಸಿರಿಗೆರೆ
ಹರಿಹರ       ತಾಲ್ಲೂಕು
ದಾವಣಗೆರೆ  ಜಿಲ್ಲೆ

೩)
ಇಂದಿನ ಸ್ಪರ್ಧೆ: ಚಿತ್ರಕ್ಕೊಂದು ಕವನ.
ಶೀರ್ಷಿಕೆ: ಚಂದಿರನ ಹಿಡಿದಂತೆ ಭಾಸವಾದಾಗ....

(ಗದ್ದೆಯ ಹಚ್ಚಹಸುರಿನ ಬಯಲಿನ ಸುಂದರ ವಾತಾವರಣದಲ್ಲಿನ ಪುಟ್ಟದೊಂದು ಕುಟುಂಬ.)

ಚಂದಿರ ಚಂದಿರ ನೀನೆಷ್ಟು ಸುಂದರ
ಆಗಸದಿ ನಿನದೇ ಅಲಂಕಾರದ ಹಂದರ
ಕಂಡ ಕ್ಷಣ ಮೂಡಿದೆ ಹರುಷ ಮಗುವಿನ ಮೊಗದಲಿ
ಉಲ್ಲಾಸದಿ ತೇಲಿದೆ ನಗೆಗಡಲಲಿ.

ಉಣ್ಣಿಸಲು ಅಮ್ಮ ಕಂದನಿಗೆ ತಂದಿಹಳು
ಬಟ್ಟಲಿನ ತುಂಬಾ ಅಶನವನು
ಒಲ್ಲೆನು ಎಂಬ ಕಂದನ ಹಠವು
ತಂದಿದೆ ಅಮ್ಮನಿಗೆ ಬೇಸರವು.

ಅಮ್ಮನೊಡನೆ ಸೇರಿದಳು ಅಕ್ಕನೂ
ಹಿಡಿದುಕೊಡಲು ಪುಟ್ಟ ಚಂದಿರನನು
ತಮ್ಮನ ಉಣ್ಣಿಸಲು ಅವಳು
ಚಂದಮಾಮನ ಕರೆತರಲು ತಯಾರಾದಳು.

ಸಿಗುವನೇ ಅವನು ಕೈಗೆ ಎನ್ನಲು
ಸಾಧ್ಯವೇ ಬಾನಿಗೆ ಕೈ ಹಾಕಲು
ಅಮ್ಮನು ಕೇಳಿದಳು ಪುಟ್ಟಿಗೆ
ತಮ್ಮನ ರಮಿಸಲು ತುಸು ಘಳಿಗೆ.

ಪೋರಿ ತಂದಳು ಅಂಗಳಕ್ಕೆ ಕುರ್ಚಿಯೊಂದ
ಏರಿ ನಿಂತಳು ಚಂದಿರನ ಕೈಯಲ್ಲಿ ಹಿಡಿದಂತೆ
ಕಂದನು ಕಂಡನು ಸಂತಸದಿ ಇದನ್ನೆಲ್ಲಾ
ಸಂಭ್ರಮ ಪಡುತ ಚಂದ್ರನ ಹಿಡಿದು ತರುವಳಲ್ಲಾ.

ಖುಷಿಯಿಂದ ಉಂಡನು ಕಂದನು
ಅಕ್ಕ ಬೀಗಿದಳು ಹಿಡಿದೆನೆಂದು ಚಂದ್ರನನು
ನೀ ಮೂಡಿರದ ದಿನವೆಲ್ಲಾ ನೇಸರದಿ
ಉಣ್ಣುವನೇ ಕಂದನು ಬೇಸರದಿ...

ರಚನೆ:✍🏻 ರೇಣುಕಾ ಎಂ.ಕೆ.
                ಗದಗ

೪)
ಸ್ಪರ್ಧೆಗಾಗಿ :

ಶೀರ್ಷಿಕೆ :  ಬಿದಿಗೆ ಚಂದ್ರಮ


ಮುಗಿಲ ಮೇಲಿದೆ ಬೆಳ್ಳಿಯ ಬಟ್ಟಲು
ಎಳೆಯರು ತವಕಿಸುತಿಹರು ನಿನ್ನ ಹಿಡಿಯಲು
ಚಂದಮಾಮ ಚಕ್ಕುಲಿಮಾಮ ಓಡೋಡಿ ಬಾ
ಬಾನಂಗಳದಿ ತಾರೆಗಳೊಡನೆ ಆಡೋಣ ಬಾ

ಅಮಾವಾಸ್ಯೆಯೆಂದು ನೀ ಕಾಣಲಾರೆ ಏಕೆ
ಕೆಲವೊಮ್ಮೆ ಹುಣ್ಣಿಮೆಯಲಿ ನಿನ್ನ ಗ್ರಹಣವೇಕೆ ?
ಹೆಮ್ಮಕ್ಕಳ ಮೊಗವು ಹುಣ್ಣಿಮೆಯಲಿ ನಿನ  ರೂಪ
ಎಳೆ ಮಕ್ಕಳ ನಗುವಿನಲಿ ನೀ ಬರುವೆ ಬಿದಿಗೆಯಾಗಿ

ಸಾಗರದೇಳು ಬೀಳುಗಳು ನಿನ್ನ ಕೈಯಲ್ಲಿ
ಸೂರ್ಯನಿಗಿಂತಲೂ ಆಕರ್ಷಣೆ ನಿನ್ನಲ್ಲಿ
ಹುಣ್ಣಿಮೆಯ ರಾತ್ರಿಯಲಿ ನೀನೇ ಅರಸ
ಗಜಮುಖನ ಗರಿಕೆಯೊಂದಿಗೆ ಯಾಕೆ ನಿನ್ನ ಸರಸ

ನನ್ನಂತರಂಗದ ಒಲವಿನ ಸಾಗರಕೆ
ಸೇರೋ ಭಾವಾಂತರಂಗದ ಸೊಗಸುಗಾರ
ಹಾಲ್ಗಡಲಲಿ ಪ್ರೀತಿಯ ಹೊಳೆ ಹರಿಸಿ
ಜೇನ್ಗಡಲಲಿ ಸಿಹಿಪಾನವ ಮಾಡಿಸೋ ಕನಸುಗಾರ

ಒಮ್ಮೆ ನಾ ಹೋದೆ ಕನಸಿನ ಲೋಕಕೆ
ನಭದಿ ಬೆಳ್ಳಿಚುಕ್ಕಿ ಕೂಡಿ ನಿನ ಕಂಡಾಗ
ನವೋಲ್ಲಾಸದಿ ಮನ ಹರ್ಷಿಸಿತು
ಗರಿಬಿಚ್ಚಿ ದೇಹ ನರ್ತಿಸಿತು

ಅಸನವೇರಿ ಕರದಿ ಪಿಡಿಯುವೆ
ಮುದ್ದು ಮೊಗದ ಒಲವಿನ ಆಸರೆ
ನಕ್ಷತ್ರದ ರಾಶಿ ರಾಶಿಯಲಿ ಮೀಯುತಲಿರುವೆ
ವದನದಿ ಕಾಂತಿಯ ಹೊಮ್ಮಿಸಿ ಶುಭ್ರನಿರುವೆ.


ಗಾಯತ್ರಿ ನಾರಾಯಣ ಅಡಿಗ
ಶಿಕ್ಷಕರು  , ವಂಡ್ಸೆ

೫)

ಸ್ಪರ್ಧೆಗಾಗಿ

ಶೀರ್ಷಿಕೆ:ಅಂಬರದಲ್ಲಿ ಏನಿದೆ

ಆಕಾಶಕ್ಕೆ ನೆಟ್ಟ ದೃಷ್ಟಿಯಿಟ್ಟು
ಯಾರ ಎಣಿಕೆಯಲ್ಲಿರುವೆ..!
ಶಶಿಯಲ್ಲಿ ಯಾವ ವಿಷಯಕ್ಕೆ
ಮನವಿ ಸಲ್ಲಿಸುತ್ತಿರುವೆ..!

ಮರು ಮಾತಾಡದೆ ಮೌನ
ಧಾರೆಯಲ್ಲಿ ಯಾಕೆ ಕಾದಿರುವೆ
ಮುಚ್ಚಿಟ್ಟ ಭಾವನೆಗಳನ್ನು
ಕೂಡಿಟ್ಟ ಕನಸುಗಳನ್ನು ತೆರೆದಿಡು

ಹೆಣ್ಣಮನ ಅರಿತಾಗ
ಹೃನ್ಮನ ತುಂಬುವುದು .!
ಕಷ್ಟ ಬೆನ್ನ ಹತ್ತಿದಾಗ
ಹೃದಯ ಕರಗುವುದು.!

ಕಂಡ ಕನಸುಗಳ ವೈಯ್ಯಾರವ
ಬಾನಂಗಳದ ಶಶಿಗೆ ಒಪ್ಪಿಸು..!
ಮರೆತ ಮಾತುಗಳ ಬೆಡಗ
ಮರೆಯದೆ ನನಗೆ ತಿಳಿಸು ..!

ಮರಗಬೇಡ ಹೊತ್ತು ತರುವೆ
ಖುಷಿಯ ಪರಿಚಯವ..!
ಕೊರಗಬೇಡ ಸರಿಸಿ ಬಿಡುವೆ
ನಿನ್ನ ಕಷ್ಟದ ಸಮಯವ..!

ಅಮೃತ ಎಂ ಡಿ
(ಭಾವನೆಗಳಿಲ್ಲದವಳ ಭಾವತೀರಯಾನ)
ಮಂಡ್ಯ.
ವಿದ್ಯಾರ್ಥಿನಿ

೬)
ಚಿತ್ರ ಕಾವ್ಯ ಸ್ಪರ್ದೆಗಾಗಿ

 ಬಂದು ಬಿಡು ನನ್ನೊಡನೆ
-------------------------------------
ಸುಂದರ ವದನದ ಚಂದಿರನೆ
ಆಗಸದಲ್ಲೇ ನೆಲೆಸುವನೆ
ನಿಶೆಯಲಿ ಬೆಳಕನು ಚೆಲ್ಲುವನೆ
ತಾರೆಗಳೊಂದಿಗೆ ಹೊಳೆಯುವನೆ

ಹುಣ್ಣಿಮೆಯಲ್ಲಿನ್ನೂ ಬೆಳೆಯುವನೆ
ಬೆಳದಿಂಗಳ ಹೊಳಪನ್ನು ಸೂಸುವನೆ
ಕತ್ತಲ ಭಯವನು ಕಳೆಯುವನೆ
ನಭದಲಿ ಸೋಜಿಗ ತೋರುವನೆ

ಕುರ್ಚಿಯನತ್ತಿ ನಿಂತಿಹೆನು
ನಿನ್ನನು ಕೈಯಲ್ಲಿ ಹಿಡಿದಿಹೆನು
ಜೊತೆಯಲಿ ಒಯ್ಯಲು ಬಂದಿಹೆನು
ಸ್ನೇಹದ ಕರವನು ಚಾಚಿಹೆನು

ಧರಣಿಯ ನಾನು ತೋರಿಸುವೆ
ಮಾತನು ಆಡುತ ಜೊತೆಗಿರುವೆ
ಮನಸಿನ ದುಗುಡವ ನಾ ಕಳೆವೆ
ಗೆಳತಿಯರನ್ನೂ ಕರೆತರುವೆ

 ನನ್ನೊಡೆ ಬಂದು ಸಹಕರಿಸು
ತಂಪಿನ ಕಿರಣವ ಧರೆಗಿಳಿಸು
ರಂಗಿನ ಕನಸನು ಚಿಗುರೊಡೆಸು
ರಾತ್ರಿಯ ಸೊಬಗಿಗೆ ಮೆರುಗುಣಿಸು

ಜಡದ ದೇಹಕೆ ಚುರುಕುಣಿಸು
ಮನದ ನೋವಿಗೆ ತಂಪೆರಚು
ತಿಳಿಯದ ಪ್ರಶ್ನೆಗೆ ಉತ್ತರಿಸು
ಹೃದಯದ ಕತ್ತಲ ಪರಿಹರಿಸು.

ಉಷಾ ದಿನೇಶ್
ಶಿವಮೊಗ್ಗ

೭)
ಚಿತ್ರ ಕವನಸ್ಪರ್ಧೆಗಾಗಿ

ಬಾನ ತಾರೆಯ ಹಿಡಿವಾಸೆ

ನಭದಲಿ ಹೊಳೆಯುತ
ನಗುವನು ಬೀರುತ
ಚುಕ್ಕಿಗಳೆಡೆಯಲಿ ಮಿನುಗುವನು

ಹುಣ್ಣಿಮೆ ದಿನದಲಿ
ನುಣ್ಣಗೆ ಹೊಳೆಯುತ
ಎಲ್ಲರ ಮನವನು ಸೆಳೆಯುವನು

ದಿನ ದಿನ ಕರಗುತ
ಬಾನಲಿ ಚಲಿಸುತ
ರಸಿಕರ ಕನಸನು ತುಂಬುವನು

ಗಗನದ ಕುಸುಮವ
ಹಿಡಿಯುವ ಆಸೆಯು
ಮುಗುದೆಯ ಮನದಲಿ ತುಂಬಿಹುದು

ನಿಲುಕದ ನಕ್ಷತ್ರವ
ಹಿಡಿಯುವ ಬಯಕೆಗೆ
ಏರುತ ಕುರ್ಚಿಯ ಮೇಲಿನಲಿ

ಕೈಗಳ ಚಾಚುತ
ಹಿಡಿದೆನು ಎನ್ನುತ
ಭಾವವ ತೋರುತ ನಗುತಿಹಳು

ಚಂದಿರ ಸಿಕ್ಕನು
ಎನ್ನುವ ತೆರದಲಿ
ತೋರಿತು ಕೈಗಳ ಎಡೆಯಲ್ಲಿ

ಅರ್ಧ ಚಂದಿರ
ನಗುವನು ಬಾಲೆಯ
ಕನಸನು ನೋಡುತ ನಭದಲ್ಲಿ

ಪಂಕಜಾ.ಕೆ .ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
18.02.2020

೮)

ಸ್ಪರ್ಧೆಗಾಗಿ

ಚಂದಿರನ ಚಲುವೆ

ಪ್ರೀತಿಯ ಚಿಲುಮೆಯ ಭರವಸೆಯು
ಹೊಳಪಿನ ಬಿಳುಪಿಗೆ ರಜತ ರೂಪವು
ಶಿವನ  ಒಲುಮೆಯ ಹೆಗಲನು ಏರಿದ
ಗಂಗೆಯ ಚಿಲುಮೆಗೆ ಸಾಕ್ಷಿಯ ಭೂಪ

ಚುಕ್ಕಿಯ ಆಟಕೆ ಇರುಳಿನ ಸಾಕ್ಷಿಯು
ಚಂದಿರನಾಟಕೆ ಬಾಲೆಯ ಭಾವನೆ
ನಿಲುಕಿಸಿಕೊಳ್ಳಲು ಕಾಲಡಿ ಕಟ್ಟೆಯು
ಕೈ ಬೆರಳಡಿ  ಸಿಕ್ಕಿದೆ  ಹಿಡಿದೆ ಬಿಟ್ಟಳು

ತಂಗಾಳಿಯ ಇರುಳು ಏಕಾಂತದ ಕಾಂತೆ
ಮುಂಗುರುಳು ಜೀಕಿವೆ ಏಕಾಂತದ ವಾರ್ತೆ
ಕೈಲಾಗದ ಕನಸಿಗೆ ಕೈಯನು ಇಟ್ಟೆ
ರೆಕ್ಕೆಬಿಚ್ಚಿ ಗಗನಕ್ಕೆ ಹಾರುವ ಬಯಕೆ

ಕಾಣದ ಭಾವಕೆ ರೂಪವ ನೀಡುವ
ಪುಟ್ಟ ಪುಟ್ಟ ಕನಸು ಆಯಿತು ನನಸು
ಸೋತ ವದನದಿ ಅರಳಿದ ಖುಷಿಯು
ರಜತದಿ ಮಿನುಗಿದೆ ಬೆಳಕಿನ ಕಿಡಕಿ

ಗಗನ ಕುಸುಮವು ಅರಳಿದೆ ಅವತಾರದಲಿ
ಹೊಂಗನಸಿನ ಚೆಲುವು ತುಂಬಿದೆ ಒಲವು
ಗೆಳೆಯನ ಅರಸುತ ಕತ್ತಲು ಕಾವಲು
ಪ್ರೇಮದ ಬಲೆಯಲಿ ಸಂಗಾತಿಯನರಸಿ

ರಾಮನ ಪ್ರೇಮದಿ ಕೈಕೆಯ ಕಾಡಿದ
ಲೋಕದ ಭಾವನೆ ಕೆರಳಿಸಿದೊಡೆಯ
ಕನ್ಯೆಯ ಖುಷಿಯು ಕೆನ್ನೆಯ ಗುಳಿಯು
ಬಣ್ಣಿಸಲಾಗದು ಚಂದ್ರಲಲನೆಯ ಸುಳಿಯು

ಬಸವರಾಜ ಕುಂಬಾರ ಬಾಗಲಕೋಟ

೯)

ಶಶಿ ಹಿಡಿದ ತರುಣಿ(ಮಂದಾನೀಲ ರಗಳೆ)

ಚಂದ್ರನ ಪಿಡಿದಿಹ ನಲ್ಲೆಯು ತಮದೊಳು
ಲಾಂದ್ರವು ಕರದೊಳು ಹಿಡಿದೆನು ಖುಷಿಯೊಳು
ರಾತ್ರಿಯ ಸಮಯದಿ ಶಶಿಯನು ನಲ್ಲೆಯು
ಖಾತ್ರಿಯ ಮಾಡಲೊಲವಿನಲಿ‌ ತರುಣಿಯು//

ಪ್ರೇಮದ ಭಾವದಿ ಶಶಿಯನು ನೋಡುತ
ರಾಮನು ಸೀತೆಯೊಲವಿನಲಿ ಕೂಡುತ
ರಮೆಯನು ರಮಿಸಿಹ ರಮಣನ ತೆರದಲಿ
ರಮಣಿಯು ಚುಂಬಿಸಿ ರಮಣನ ಖುಷಿಯಲಿ//

ಗಗನದ ಚಂದ್ರನ ಬೆಳಕನು ನೋಡಲು
ಹಗಲಿನ ಸಮಯದಿ ತಾರೆಯು ಕಾಣಲು
ಕಪ್ಪಿನ ನಡುವಿನ ಹೊಳೆದಿಹ ತಾರೆಯು
ಸಪ್ಪನೆ ಮೊಗದಲಿ ತಂದಿಹ ಖುಷಿಯು//

ಬಣ್ಣಿಸಿ ನಿಂದಳು ಚಂದ್ರನ ಲಲನೆಯು
ಕಣ್ಣಲಿ ನೋಡುತಲಪ್ಪಿದ ಕುವರಿಯು
ಹಠದಲಿ ಪಿಡಿದಂ ಶಶಿಯನ್ ಕನಸನು
ಜಟೆಯಲಿ ಧರಿಸುತ ಮೆರೆದಂ ಶಿವನನು//

ಸಾಗರ ಮುತ್ತಿನ ತೆರದೊಳು ಜನಿಸಲ್
ಚಾಗದ ವಾರಿಧಿ ರತ್ನವ ನೀಡಲ್
ಅಂತೂ ಕನ್ಯೆಯು ಖುಷಿಯನು ಪಟ್ಟಳು
ಕಾಂತನ ನೆನೆದು ಭ್ರಮೆಯಲ್ ಹೋದಳು //

ಶಂಕರಾನಂದ ಹೆಬ್ಬಾಳ

೧೦)
ಸ್ಪರ್ಧೆಗೆ

*ಅರ್ಧ ಚಂದ್ರ*

ಕತ್ತಲೆಯು ಕವಿದ ರಾತ್ರಿಯಲ್ಲೊಂದು ದಿನ।
ಸುತ್ತಲೂ  ಜೀರುಂಡೆಗಳ ಸಂಗೀತ ಸಹಗಾನ।
ನೆತ್ತಿಯ ಮೇಲೊಮ್ಮೆ ಕಣ್ಣು ಹಾಯಿಸಿದಾ ಕ್ಷಣ।
ಮುತ್ತು ಚೆಲ್ಲಿದಂತೆ ಆಹಾ ಮೋಹಕ ನಕ್ಷತ್ರ ಗಡಣ।

ಎಣಿಸಲಾರದಾ ಅಪ್ಪನ ದುಡ್ಡು ನಭದಲೆಲ್ಲಾ ಹರಡಿ।
ಗಣಿತಕ್ಕೆ ಸಿಗದೇ, ಅನಾದಿ ಅನಂತವಾಗಿ ಮಿನುಗುತ್ತಿದೆ।
ದಣಿವಿಲ್ಲದೇ ಒಂದಕ್ಕೊಂದು ಅರಿವಿಲ್ಲದೇ ಅಂಡಾಕಾರ ಸುತ್ತಿ
ತಣಿಯದಿದೆ ಕುತೂಹಲ,ಮತ್ತೆ ಗುರುತ್ವ  ಬಾನಿನ ಕಡೆಗಿದೆ

ಕೋಟಿ ಕೋಟಿ ಸೂರ್ಯರು ಮುಕ್ಕೋಟಿ ಭುವಿಗಳಿರಬಹುದೇ।
ದಾಟಿ ನಿಂತಿದೆ ಖಗೋಳ ಜ್ಞಾನ ದ ಇಂದಿನ ಸತ್ಯ।
ಸಾಟಿಯಿದೆಯೇ ವಿಶ್ವದ ಉದ್ದಗಲಕೆ ಕತ್ತಲಾಚೆಗೆ।
ನೋಟವೊಂದೇ ಸತ್ಯ ಅದರಾಚೇ ನಂಬದ ಮಿಥ್ಯೆ।

ಮಹಾವ್ಯಾಧನೋ ಕಟಕನೋ ಸಿಂಹನೋ ಮಿಥುನನೋ।
ಸಹವಾಸಿಗಳಲ್ಲಿ ಜ್ಯೋತಿರ್ವರ್ಷಗಳ ಮಹಾ ಅಂತರ।
ದಹಿಸುತ್ತಿವೆ ತಮ್ಮೊಳಗೆ ಮಹಾ ರಾಸಾಯನಿಕಗಳ ಸಂಗಮ ಜ್ವಾಲೆ।
ರಹಸ್ಯದಲಿ ಇನ್ನೇನಿದೆಯೋ! ಮೇಲ್ನೋಟಕ್ಕೆ ಚುಕ್ಕಿ ಚಂದಿರ।

ಅಸಂಖ್ಯಾತ  ಆಕಾಶಕಾಯಗಳ ನಡುವೆ ಭೂಮಿಯು ಬಿಂದು।
ಮುಸುಕಿದೆ ಅವಕಾಶ ಜಶವಿದೆಯೇ ಹುಡುಕಾಟದಲಿ।
ವಶವಾದ *ಅರ್ಧ ಚಂದಿರ* ,ತುಸು ನಗೆ ಬೀರಿದ ಮಂಗಳ।
ನೇಸರನ ಬುಡವಿನ್ನು ಕತ್ತಲು ಕರಗಬಹುದೇ ನೀಲಿ।


ನೋಡುವ ಕಣ್ಣಿದ್ದರೆ ಸುಂದರ ನೋಟವಿಹುದು।
ಕಾಡುವ ಮೆದುಳಿದ್ದರೆ ಜ್ಞಾನದ ಭಂಡಾರವಿಹುದು।
ಹೂಡು ಸಾವಿರದ ಪ್ರಶ್ನೆಗಳ ಬಾಣ ಆಗಸದಾಚೆ।
ನೀಡಬಹುದು ಎಂದಾದರೂ ಉತ್ತರ! ಬಾ ಹೊರಗೆ!!

✍🏻
ಮಂಜುನಾಥ ಕೆ ಶಿವಪುರ
'ಒಲುಮೆ'  ೫೭೬೧೧೨

೧೧)
*ಸ್ಪಧೆ೯ಗಾಗಿ*

*ಶೀಷಿ೯ಕೆ* : _ಬೆಳ್ಮುಗಿಲ ಚೆಲುವೆ_

ಬೆಳ್ಮುಗಿಲ ಬಾನೆತ್ತರಕ್ಕೆ ಹಾರಿ ನಿನ್ನುಸಿರ
ತಾಳಕೆ ಮಿಡಿದು ತಂದಿಡುವೆ ಚಂದಿರ
ನಿನ ಹೃದಯ ಸಂಗಮಕೆ ನನ ಸಿಂಗಾರ
ಬಿಸಿಯುಸಿರ ಹಾಲ್ಗೆನ್ನೆಯ ನನ ನೇಸರ,

ಒಪ್ಪಂದಕ್ಕೆ ಸಹಿ ಹಾಕಿ ಬಿಡು ಈಗಲೆ
ಆಗಸಕೆ ಜಿಗಿದು ನಿನ ಒಡಲು ಸೇರುವೆ ಈಗಲೆ
ನಿನ ಅಂದ ನೋಡುತ ಚಂದಿರನು ಮರೆಯಾದ
ನಿನ ವದನ ಸೌಂದಯ೯ಕೆ ನೇಸರ ಒಡೆಯನಾದ,

ಕಾಪಿಟ್ಟು ಕಾಯುತ್ತಿದೆ ನಿನ ಒಪ್ಪಿಗೆಗಾಗಿ
ಸಡಿಲಿಸಿ ಬಿಡು ಅಂತರಾಳ ನನಗಾಗಿ
ಎದೆಯಾಳ ಬಿರಿದು ತವಕಿಸಿದೆ ನಿನಗಾಗಿ
ಸಮೀಪಿಸು ತುಸು ನೀ ಅಪ್ಪುಗೆಗಾಗಿ,

ಬಾನಾಡಿಯ ಚಂದಿರನ ತೊಳಲಾಟಕೆ
ಸಿಂಗರಿಸಿಹ ನಕ್ಷತ್ರಗಳ ಆಭ೯ಟಕೆ
ಕಂಪಿಸು ಬಾ ನನ ಎದೆಯಾಳಕೆ
ಇಳಿದು ಅವೀಭ೯ವಿಸು ಮಧುಮೋಹಕೆ,

ಬೆಳದಿಂಗಳ ಬೆಳಕು ಕರೆ ನೀಡಿದೆ ಇಂದು
ಮಧುಮಂಚಕೆ ಏರಲು ಹಪಹಪಿಸಿದೆ ಇಂದು
ಬಿಸಿಯುಸಿರು ಹಾತೊರೆದಿದೆ ಚುಂಬಿಸಲು ಬಂದು
ಸಮ್ನೋಹಿತನಾಗಿ ನಿನ ಆಲಿಂಗನಕೆ ರಮಿಸಿದೆ ಇಂದು,

 *ಹೆಸರು* : ಪೀರ್ ಸಾಹೇಬ್ ಬೀರಬ್ಬಿ
ಕಂದಾಯ ವಸೂಲಿಗಾರರು,
ಮಹಾನಗರ ಪಾಲಿಕೆ, ಬಳ್ಳಾರಿ.
*ವಿಳಾಸ* : ಹಾರಕನಾಳು ಅಂಚೆ,
ಹರಪನಹಳ್ಳಿ ತಾಲ್ಲೂಕು,
ಬಳ್ಳಾರಿ ಜಿಲ್ಲೆ.
ಜಂಗಮವಾಣಿ : ೯೬೩೨೯೫೩೦೬೯

೧೨)

*ಚಿತ್ರ ಕವನ ಸ್ಪರ್ಧೆಗಾಗಿ*
*ಶೀರ್ಷಿಕೆ-ಹಿಡಿಯೋಣ ಬಾ ಚಂದ್ರನ*

ಹಿಡಿಯೋಣ ಬಾ ಚಂದ್ರನ
ಬಾಳಿನ ನಗುವ ರಮಣನ
ಫಳಫಳ ಹೊಳೆವ ಕಾಂತನ
ಇರುಳಿನೊಡೆಯ ಶಶಿಕಾಂತನ!

ಚಂದ್ರನ ಹಿಡಿದಿರುವೆ ಕೈಯಲ್ಲಿ
ಕನಸಲ್ಲೊ ನನಸಲ್ಲೊ ನಾನರಿಯೆ ಇಲ್ಲಿ
ನೀಲ ಮೇಘಗಳ ಜೊತೆಯಲ್ಲಿ
ನಾ ನಗುತಿರುವೆ ಹೂ ನಗುವ ಚಲ್ಲಿ!

ನಿನ್ನಂತೆ ಮಿನುಗಲು ಹಂಬಲಿಸುತಿರುವೆ
ಹಗಲಿರುಳೆನ್ನದೆ ಮಿಡಿಯುತಿರುವೆ
ಚಂದಿರನೊದನವ ಕೈಲಿ ಹಿಡಿದಿರುವೆ
ಆತ್ಮೀಯತೆಯ ಬಯಸಿ ಬಂದಿರುವೆ
ತೋಳ್ಗಳಲಿ ಬಳಸಲು ಕಾದಿರುವೆ!

ಶಶಿ ಧರಣಿಯ ನಡುವಿನ ಅಂತರ
ಸ್ನೇಹ
ಮೀರಿ ನಡೆಯಬೇಕೆಂಬ ಮೋಹ
ಬಾನಲ್ಲಿ ನೆಲೆಸಬೇಕೆಂಬ ದಾಹ    ಕಂದನ ಪ್ರೀತಿ ಅಪ್ಪಿಕೋಚಂದ್ರಾಮ!

ಶ್ರೀಮತಿ ಕವಿತಾ ಜಿ.ಸಾರಂಗಮಠ
ಹಿಂದಿ ಉಪನ್ಯಾಸಕಿ. ಹವ್ಯಾಸಿ ಬರಹಗಾರ್ತಿ,
ರಾಣೆಬೆನ್ನೂರು.

೧೩)

*ಚಿತ್ರ ಕವನ*

 *ಸ್ಪರ್ಧೆಗಾಗಿ*

*ವ್ಯರ್ಥ ಪ್ರಯತ್ನ*

ರಾತ್ರಿ ವೇಳೆಯಲ್ಲಿ ನಭೋ ಮಂಡಲದಲ್ಲಿ ಅರಸನು ಈ ಚಂದ್ರ !
ಚುಕ್ಕೆ ತಾರೆಗಳು ಮಿನುಗುತಲಿರಲು ಮದ್ಯದಲ್ಲಿ  ಇವ ದೇವೇಂದ್ರ !!

ಪೂರ್ಣಿಮೆ ದಿನದ ಪ್ರತಿಬಿಂಬದ ನಂತರ ಮುಸುಕುವುದವಗೆ  ನೆರಳು !!
ತೋರಿಸುವುದು ಆದು ಜೀವನ ಗತಿಯನು ಅರಿಯಬೇಕಿದೆ ಸತ್ಯದ ತಿರುಳು !!

ಗಗನ ಕುಸುಮವನು  ಹಿಡಿಯಲು ಹೋದರೆ ಉದ್ದೇಶ ಫಲಿಸುವುದಿಲ್ಲ !
ಭ್ರಮೆಯ ಬದುಕಿನ ಚಿತ್ರಣ ಸಲ್ಲದು ವಾಸ್ತವವೇ ಕಠಿಣವಿದೆಯಲ್ಲ !!

ಗುರಿಯು ಹಿರಿದಾಗಿರ ಬೇಕೆಂಬ ಸದುದ್ದೇಶವು ಸಹಜ !!
ನಿಲುಕಲಾರದೆಂದು ತಿಳಿದೂ ಹಸ್ತ
ಚಾಚುವುದು ಅಸಹಜ !

ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಹಿರಿಯರ ಅಂಬೋಣ !
ಎಷ್ಟೇ ಎತ್ತರ ಹತ್ತಿ ಬೊಗಸೆ ಚಾಚಿದರೂ ಸಿಗಲಾರದದು ನಂಬೋಣ  !!

 ವ್ಯರ್ಥ ಪ್ರಯತ್ನ ! ಸುಂದರಿ ನಿನ್ನ ಕೈಯ್ಯೊಳಗವನು ಬಂಧಿ ಆಗಲಾರ !
ಅವನೆಂದೆದೂ ದೂರದ ಆಗಸದಲ್ಲಿ  ಮಿನುಗುವ  ಸರದಾರ !!

*ಶ್ರೀಮತಿ ಜೋಶಿ ಶಿಕ್ಷಕಿ*
 *ನಿಸರಾಣಿ ಸೊರಬ*
*ಶಿವಮೊಗ್ಗ*

೧೪)
ಸ್ಪರ್ಧೆಗಾಗಿ

ಚಿತ್ರಕ್ಕೊಂದು ಕವನ

ಶೀರ್ಷಿಕೆ : ಅಂಬರ ಚಂದಿರ
------------------------------------

ಸೂರ್ಯನಿರಲು ಹಗಲಿನಲ್ಲಿ
ಕಂಡು ಕಾಣದೆ ಅವಿತು ಕುಳಿತಿರುವೆಯೋ l
ಎಷ್ಟು ಹುಡುಕಲಿ ಹಗಲಲ್ಲಿ ನಿನ್ನ
ರಾತ್ರಿಗೆ ಹುಣ್ಣಿಮೆಯ ತರುವೆಯೋ l

ಚಂದ ಮಾಮನಂತೆ ನೀನು
ಅಮ್ಮ ತೋರುತಿದ್ದಳು ನಿನ್ನನು
ಅಷ್ಟು  ದೂರವೇಕೆ  ನೀನು
ಕೈಗೆ ಎಟುಕದೆ ಕುಳಿತಿರುವೆ ಹೇಗೆ ಮುಟ್ಟಲಿ ನಿನ್ನನು

ಅಂಬರದಿ ನಗುತ ನಲಿವೆ
ಹೊಳೆವ ತಾರೆಗಳೊಂದಿಗೆ
ಅರ್ಧ ಚಂದ್ರ ನೀನು ಈಗ
ಹಿಡಿದು ಶಿವನ ಮುಡಿಗೆ ಮುಡಿಸುವೆ

ಎಷ್ಟು ಹೊಳಪು ತಾರೆಗಳದ್ದು
ಅವರೊಂದಿಗಿರುವ ನೀನೆ ಪುಣ್ಯಾತ್ಮನು
ನಿನ್ನ ಮುಟ್ಟಿ ಹಿಡಿಯಲೆಂದು
ಆತುರಳಾಗಿರುವೆ ಕೈ ಎಟುಕಬಾರದೇನು

ನೀಲಾ ಬಾನ ಚುಕ್ಕಿ ತಾರೆ
ಜೊತೆಗೆ ಇರುವೆ ಚಂದಮಾಮನೇ
ಒಲವ ಹಾಲ ಬೆಳಕ ಚಲ್ಲು
ಕತ್ತಲು ಅಳಿಸಿ ಚಂದ ಮಾಮನೇ

ಹಗಲು ಬೆಳಕು ರವಿಯ ಬದುಕು
ಹೊಳೆವ ರಶ್ಮಿ ಹೊನ್ನ ಹೊಂಗಿರಣವು
ಇರುಳ ಬೆಳಕು ನಿನ್ನ ಬದುಕು
ಮಿನುಗುತಿವೆ ತಾರ ಸಮೂಹವು

ಹೆಸರು : ಮಂಜುನಾಥ ನಾಯಕ ಎನ್ ಆರ್
ಕಾವ್ಯನಾಮ : ರತ್ನತನಯ
ಊರು : ನುಗ್ಗಿಹಳ್ಳಿ
ವೃತ್ತಿ : ಭದ್ರತಾ ಮೇಲ್ವಿಚಾರಕರು

೧೫)
*ಚಂದಿರನೊಡನೆ ಸಂಭಾಷಣೆ*
------------------
ಕನಸುಗಳ ನಿಚ್ಚಣಿಕೆ ಗಗನದೆಡೆಗೇರಿಸುತ
ಚಂದಿರನ ಹಿಡಿವಾಸೆ ನನಗಿಹುದು ಗೆಳತಿ
ತಂಗದಿರನನು ಪಿಡಿದು ನಯವಾಗಿ ಕೇಳುವೆನು
ನನ್ನವಳ ಹೃದಯಕ್ಕೆ ತಂಪನೀಯೆಂದು

ನಿನ್ನ ಕನಸುಗಳನ್ನು ಸಾಲ‌ ನೀಡೆಯ ನನಗೆ
ಸ್ವಲ್ಪವೇ ಕಮ್ಮಿಯಿದೆ ಗುರಿ ಮುಟ್ಟಲು
ಅದೊ! ನೋಡು! ಸಿಕ್ಕಿದನು ಚಂದಿರನು ನಮಗಿಂದು
ಮಾತನಾಡಿಸಲೇನೆ ಗೆಳತಿ ಅವನ?

"ಜಗದ ತಂಪುಗಳೆಲ್ಲ ನಿನ್ನೊಳಗೆ ಇಹುದಂತೆ
ಅಹುದೇನೊ ಉಡುಪತಿ ಉಸುರು ನೀನೊಮ್ಮೆ"
"ನನ್ನ ವಿರಹದ ಉರಿಗೆ ತಂಪನೀಯುವ ಶಕ್ತಿ
ನಿನಗೇಕೆ ಇಲ್ಲೆಂದು ನೀ ಹೇಳೆಯಾ"

"ಈ ಪರಿಯ ನೋವುಗಳು ನನಗೆ ಬಂದಿಹುದೇಕೆ
ಬೇರೆಯೆಲ್ಲರು ಸಂತಸದೊಳಿರ್ಪರಲ್ಲ!"
ಕಷ್ಟವೇ ಏಕೆನಗೆ ಸುಖವಿಲ್ಲವೇ ಜಗದಿ
ಕಣ್ಣೊರೆಸಿಕೊಳ್ಳುತ್ತ ಕೇಳುತಿರುವೆ

"ನನ್ನ ಬಾಳಲೆ ಇಹುದು ನಿನ್ನ ನೋವಿಗೆ ಮದ್ದು
ವೃದ್ಧಿ-ಕ್ಷಯ ಜೀವನದ ಎರಡು ಮುಖವು!"
ವಿರಹಕ್ಕೆ ಮರುಗಿದರೆ ಹರುಷಕಾಂಬುವುದೆಂತು
ಸಮದರ್ಶಿಯಾಗೆಂದ ಆ ಚಂದಿರ

-*ಕವಿಶಂಕರ*
(ಶಂಕರನಾರಾಯಣ ಉಪಾಧ್ಯಾಯ
ಕುಂದಾಪುರ)

೧೬)

" *ಭಿನ್ನಹ* "

ನೀ ಕೇಳಬಹುದು ನನ್ನ ಹಿಡಿಯಲು ಕಾರಣವೇನೆಂದು,
ಅದಕಾಗಿ ಸಿದ್ಧವಾಗಿಹೆ ಉತ್ತರ ನೀಡಲೆಂದು,
ತಿಳಿದಿಹೆ ನಾ ನಿನ್ನಂಗಳ ತಂಪಿಹುದೆಂದು,
ಅರಿತಿಹೆ ನಾ ನಿನ್ನ ಬೆಳಕಿನಲಿ ಕಂಪಿಹುದೆಂದು!

ಕರೆದೊಯ್ಯಬೇಕಿಂದು ನೀ ಎನ್ನನೆಂದು,
ನಿನ್ನನು ಕಷ್ಟಪಟ್ಟು ಹಿಡಿದಿಹೆ ಕರದೊಳಿಂದು,
ಮನೆಯ ಮಾಡುವೆ ನಿನ್ನ ಅಂಗಳದೊಳಿಂದು,
ನಿನ್ನ ವದನವ ನಿತ್ಯ ಹತ್ತಿರದಿಂದ ಕಾಣಲೆಂದು!

ನಾನಾಗಬಯಸಿಹೆ ನಿನ್ನ ಆತ್ಮೀಯತೆಯ ಬಿಂದು,
ಅದಕಾಗಿ ಮರಳಿ ಮರಳಿ ಪ್ರಯತ್ನಿಸಿ ಹಿಡಿದಿಹೆ ನಿನ್ನನಿಂದು,
ನೀ ಆಗಲೆಂದು ನೀ ಎನ್ನ ಬಂಧು,
ಅದಕಾಗಿ ನೀ ನೀಡಬೇಕು ಸಿಂಧು!

ಭೂಮಿಯ ಉಪಗ್ರಹವಾದುದರಿಂದ,
ನಿನ್ನೊಡನೆನಗೆ ಮೂಡಬೇಕಿದೆ ಬಂಧ,
ಭೂಮಿಗೂ ಚಂದಿರನಿಗೂ ಸೇತುವೆ ಈ ಸ್ನೇಹ ಸಂಬಂಧ,
ಆಗಲೆಂದು ಬಯಸಿಹೆ ಭುವಿಯೊಡಲಿನ ಈ ಪುಟ್ಟ ಕಂದ!

ನಿನ್ನ ದುಂಡಗಿನ ವದನ ಅಂದವೋ ಅಂದ,
ಬಾನಿನಲ್ಲಿ ನೀ ತೇಲುವುದೇ ಚಂದ,
ನೋಡಲೆನಗೆ ನಿನ್ನ ಆನಂದವೋ ಆನಂದ,
ಅದಕಾಗಿ ನಿನ್ನ ಕಾಣುವಾಸೆ ನಿನ್ನ ಅಂಗಳದಿಂದ!

- *ಹರೀಶ್ ಕಜೆ.*

೧೭)

ಕೈಗೆಟುಕುವನೇ ಚಂದ್ರಮ


ಬಿದಿಗೆ ಚಂದ್ರಮನು ಆಗಸದಿ ಹೊಳೆಯುತಿರೆ
ಭುವಿಯೊಳಗೆ ತಂಗಾಳಿ ಬೀಸುತಿತ್ತು
ಬೆಳ್ಳಿ ಚುಕ್ಕಿಗಳು ಹೊಳೆಹೊಳೆದು ಸೆಳೆಯುತ್ತ
ಬಾಂದಳದಿ ತೇಲೋಣವೆಂದು ಕರೆದಿತ್ತು

ಅಲ್ಲಿ ನೋಡುವೆನೆ ತಾರೆಗಳೆಲ್ಲವೂ ಚೆಲ್ಲಾಪಿಲ್ಲಿ
ಕಾರಣವ ಹುಡುಕಲು ಬೇಗ ಹೊಳೆದಿತ್ತು
ಆ ಶಶಿಯ ಬುಟ್ಟಿಯು ಓರೆಯಾಗಿಹುದ ಕಂಡೆ
ಅದರೊಳಗಿಂದ ಚೆಲ್ಲಿ ಹರಡಿಕೊಂಡಿತ್ತು.

ತಾರೆಗಳನೆಲ್ಲ ಬಾಚಿ ತಂದಿಡಲೇನು ಮನೆಯಲಿ
ಶಶಿಯೊಬ್ಬನೇ ಉಳಿವ ವಿಸ್ತಾರ ನಭದಲ್ಲೇ
ಯೋಚಿಸುತ ಮಾಡಿದೆನು ಒಂದುಪಾಯವನು
ಬಾಗಿದ ಶಶಾಂಕನನು ಸರಿಯಿರಿಸಲೇ..

ಆಕಾಶದ ಬಲು ವಿಶಾಲ ಹರವಿನಲಿ ಚೆಲ್ಲಿರುವ
ತಾರೆಗಳ ಪುನಹ ತುಂಬಿಕೊಡಲೇ..
ಏಣಿಯನು ಇಡುತಲೊಮ್ಮೆ ಹತ್ತಿ ಮೇಲಕ್ಕೇರಿ
ಚಂದಿರನ ಸರಿಪಡಿಸಿ ಬೇಗ ಬರಲೇ..

ಆಗದಾಗದು ಎಂದು ಕೂರುವುದು ಸರಿಯೇನು
ಹೊಸತೊಂದು ಯೋಜನೆ ಮಾಡಬೇಕಂತೆ..
ಏರುವೆನು ಹತ್ತಿರದ ಎತ್ತರದ ಬೆಟ್ಟವೊಂದ ನಾ
ಆಸನವನಿಟ್ಟು ಹತ್ತಲೆನಗವ ಎಟುಕುವಂತೆ..

-ಹರಿನರಸಿಂಹ ಉಪಾಧ್ಯಾಯ
ಬೆಂಗಳೂರು

ಧನ್ಯವಾದಗಳು💐


Handpicked For You

ವಾರ್ಷಿಕೋತ್ಸವದ ಸಂಭ್ರಮ‌ ಜುಲೈ ಮಾಸ 2020

ಸ್ನೇಹಿತರೇ, ನಲ್ಮೆಯ ಕವಿಮನಗಳೇ ಎಲ್ಲರಿಗೂ ನಮಸ್ಕಾರ. ನಮ್ಮ ಸಂಸ್ಥೆ ಪ್ರಾರಂಭವಾಗಿ ಒಂದು ವರುಷವಾಯಿತು.   ಈ ವಾರ್ಷಿಕೋತ್ಸವದ ಸುಸಮಯದಲ್ಲಿ, ನಮ್ಮ ಜೊತೆಗೆ ನಿರಂತ...